ಬ್ಲಾಗಿಂಗ್ – ಪರ್ಯಾಯ ಪತ್ರಿಕೋದ್ಯಮ
- ಡಾ. ಎಮ್.ಎಮ್.ನಾಯ್ಕ
ಇತ್ತೀಚೆಗಿನ ದಿನಗಳಲ್ಲಿ ತುಂಬ ಕೇಳಿಬರುತ್ತಿರುವ ಪದ “ಬ್ಲಾಗ್”. ಅದರ ಹಲವು ಪ್ರತ್ಯಯಗಳೇ ಬ್ಲಾಗಿಂಗ್, ಬ್ಲಾಗರ್, ಇತ್ಯಾದಿ. ಈ ಬ್ಲಾಗ್ ಎಂದರೆ ಏನು? ಬ್ಲಾಗ್ ಎಂದರೆ ಒಂದು ರೀತಿಯಲ್ಲಿ ಸಾರ್ವಜನಿಕ ಸ್ವಗತ ಎನ್ನಬಹುದು. ಎಲ್ಲರಿಗೂ ಓದಲು ಅನುಕೂಲವಾಗುವಂತೆ ಅಂತರಜಾಲದಲ್ಲಿ (ಇಂಟರ್‌ನೆಟ್‌ನಲ್ಲಿ) ಇಟ್ಟಂತಹ ತೆರೆದ ದಿನಚರಿ ಅಥವಾ ಡೈರಿ ಎಂದೂ ಕರೆಯಬಹುದು. ಬ್ಲಾಗ್‌ನ ಕ್ರಿಯಾರೂಪವೇ ಬ್ಲಾಗಿಂಗ್ ಅಂದರೆ ಬ್ಲಾಗ್ ನಡೆಸುವ ಕ್ರಿಯೆ. ಬ್ಲಾಗರ್ ಎಂದರೆ ಬ್ಲಾಗ್ ಬರೆಯುವ ವ್ಯಕ್ತಿ.
ಬ್ಲಾಗ್ ಎನ್ನುವುದು ವೆಬ್‌ಲಾಗ್ (weblog) ಎನ್ನುವ ಪದದಿಂದ ವ್ಯುತ್ಪತ್ತಿಯಾಗಿದೆ. ಇದನ್ನು ಮೊತ್ತಮೊದಲು ಜಾನ್ ಬಾರ್ಗರ್ ಎಂದವರು ೧೯೯೭ರಲ್ಲಿ ಬಳಸಿದರು. ಪೀಟರ್ ಮರ್‌ಹೋಲ್‌ಝ್ ಅವರು ೧೯೯೯ರಲ್ಲಿ ಇದನ್ನು ವಿ ಬ್ಲಾಗ್ (we blog) ಎಂಬುದಾಗಿ ವಿಭಜಿಸಿದರು. ಎಂದರೆ ನಾವು ಬ್ಲಾಗ್ ಮಾಡುತ್ತಿದ್ದೇವೆ ಎಂಬ ಅರ್ಥ. ತದನಂತರ ಬ್ಲಾಗ್ ಎನ್ನುವುದು ನಾಮಪದ ಮತ್ತು ಕ್ರಿಯಾಪದವಾಗಿ ಬಳಕೆಯಾಗತೊಡಗಿತು. ೨೦೦೧ರ ನಂತರ ಬ್ಲಾಗ್ ಜನಪ್ರಿಯವಾಗತೊಡಗಿತಾದರೂ ೨೦೦೩ರಲ್ಲಿ ಹಲವು ಉಚಿತ ಬ್ಲಾಗಿಂಗ್ ತಾಣಗಳು ಅವತರಿಸಿ ಬ್ಲಾಗಿಂಗ್ ಮನೆಮಾತಾಗುವಂತಾಯಿತು. ಇದಿಷ್ಟು ಬ್ಲಾಗಿಂಗ್‌ನ ಇತಿಹಾಸದ ಬಗ್ಗೆ ಚುಟುಕಾದ ಮಾಹಿತಿ.
ಬ್ಲಾಗ್ ಬಗ್ಗೆ ಈಗ ಇನ್ನಷ್ಟು ವಿವರಗಳನ್ನುನೋಡೋಣ. ಅಂತರಜಾಲದಲ್ಲಿ ಕೋಟಿಗಟ್ಟಲೆ ತಾಣಗಳಿವೆ (ವೆಬ್‌ಸೈಟ್). ಈ ತಾಣಗಳಿಗೂ ಬ್ಲಾಗ್‌ಗಳಿಗೂ ಇರುವ ವ್ಯತ್ಯಾಸವೇನು? ನಿಜವಾಗಿ ನೋಡಿದರೆ ಬ್ಲಾಗ್ ಕೂಡ ಒಂದು ಅಂತರಜಾಲ ತಾಣವೇ. ಆದರೆ ಒಂದು ವಿಧದ ತಾಣಗಳನ್ನು ಮಾತ್ರ ಬ್ಲಾಗ್ ಎಂದು ಕರೆಯಲಾಗುತ್ತದೆ. ಬ್ಲಾಗ್‌ನ ಲಕ್ಷಣಗಳು -ನಿಯಮಿತವಾಗಿ ಹೊಸ ಬರೆವಣಿಗೆಗಳನ್ನು ಸೇರಿಸುತ್ತಿರಬೇಕು, ಅವುಗಳನ್ನು ಸೇರಿಸಿದ ದಿನಾಂಕ ಪ್ರಕಾರ ಅಳವಡಿಸಿರಬೇಕು, ಕೊನೆಯ ಬರೆವಣಿಗೆ ಮೊದಲು ಲಭ್ಯವಾಗಿರುವಂತಿರುತ್ತದೆ, ಇತ್ಯಾದಿ. ಬ್ಲಾಗ್‌ನಲ್ಲಿ ಸೇರಿಸಲ್ಪಡುವ ಲೇಖನಕ್ಕೆ ಪೋಸ್ಟ್ ಅಥವಾ ಪೋಸ್ಟಿಂಗ್ ಎನ್ನುತ್ತಾರೆ. ಈ ಪೋಸ್ಟಿಂಗ್‌ಗೆ ಒಂದು ಶೀರ್ಷಿಕೆ, ಸೇರಿಸಿದ ದಿನಾಂಕ, ಮುಖ್ಯ ಬರಹ ಅಥವಾ ಲೇಖನ, ವಿಷಯ, ಇತ್ಯಾದಿ ಲಕ್ಷಣಗಳಿರುತ್ತವೆ. ಈ ಪೋಸ್ಟಿಂಗ್‌ನ ಕೆಳಗೆ ಓದುಗರು ತಮ್ಮ ಟೀಕೆ ಟಿಪ್ಪಣಿ ಸೇರಿಸುವ ಸೌಲಭ್ಯವಿದೆ. ಇಷ್ಟಲ್ಲದೆ ಈ ಬ್ಲಾಗ್‌ಗಳಿಗೆ ಆರ್‌ಎಸ್‌ಎಸ್ ಸೌಲಭ್ಯವಿದೆ. ಆರ್‌ಎಸ್‌ಎಸ್ ಎಂದರೆ ರಿಯಲಿ ಸಿಂಪಲ್ ಸಿಂಡಿಕೇಶನ್ ಎನ್ನುವುದರ ಸಂಕ್ಷಿಪ್ತ ರೂಪ.ಆರ್‌ಎಸ್‌ಎಸ್ ರೀಡರ್ ಎಂಬ ಹೆಸರಿನ ತಂತ್ರಾಂಶವನ್ನು (ಸಾಫ್ಟ್‌ವೇರ್) ಗಣಕಗಳಲ್ಲಿ (ಕಂಪ್ಯೂಟರ್) ಅಳವಡಿಸಿಕೊಂಡರೆ ಈ ಬ್ಲಾಗ್‌ಗಳನ್ನು ಗಣಕಕ್ಕೆ ಇ-ಮೈಲ್‌ಗಳನ್ನು ಇಳಿಸಿಕೊಂಡಂತೆಇಳಿಸಿಕೊಂಡು ಅಂತರಜಾಲ ಸಂಪರ್ಕ ಕಡಿದ ಮೇಲೂಓದಬಹುದು. ಬ್ಲಾಗ್ ಸುಲಭವಾಗಿ ಹೊಸ ಪುಟವನ್ನು ಸೇರಿಸುವ ಸೌಲಭ್ಯ ಹೊಂದಿದೆ. ಮಾಮೂಲಿ ಅಂತರಜಾಲ ತಾಣಗಳಿಗೆ ಈ ಸೌಲಭ್ಯವಿರುವುದಿಲ್ಲ. ಹೊಸ ಪೋಸ್ಟಿಂಗ್ ಸಾಮಾನ್ಯವಾಗಿ ಪುಟದ ಮೇಲೆ ತೋರುತ್ತದೆ. ಇನ್ನೊಂದು ಹೊಸ ಪೋಸ್ಟಿಂಗ್ ಬಂದಾಗ ಹಳೆಯ ಪೋಸ್ಟಿಂಗ್ ತಂತಾನೆ ಕೆಳಗೆ ತಳ್ಳಲ್ಪಡುತ್ತದೆ. ಟೀಕೆಯ ಕೆಳಗೆ ಇತರೆ ಓದುಗರು ಟೀಕೆಗೆ ಟೀಕೆ ಸೇರಿಸಬಹುದು. ಕೆಲವೊಮ್ಮೆ ಈ ಸರಪಣಿ ದೊಡ್ಡ ಚರ್ಚೆ ಅಥವಾ ವಾಗ್ವಾದವಾಗುವುದೂ ಇದೆ. ಎಲ್ಲ ಅಂತರಜಾಲ ತಾಣಗಳಿಗಿರುವಂತೆ ಬ್ಲಾಗ್‌ಗಳಿಗೂ ಇತರೆ ತಾಣ ಯಾ ಬ್ಲಾಗ್‌ಗಳಿಗೆ ಕೊಂಡಿ ನೀಡುವ ಸೌಲಭ್ಯವಿದೆ. ಸರಳವಾಗಿ ಹೇಳುಬೇಕೆಂದರೆ ಬ್ಲಾಗ್ ಒಬ್ಬ ವ್ಯಕ್ತಿಯ ವೈಯಕ್ತಿಕ ಅನಿಸಿಕೆಗಳನ್ನು ಜಗತ್ತಿಗೆಲ್ಲ ತಿಳಿಯುವಂತೆ ಸಾರ್ವಜನಿಕವಾಗಿ ಬರೆಯುವ ವ್ಯವಸ್ಥೆ.
ಯಾವ ಯಾವ ರೀತಿಯ ಬ್ಲಾಗ್‌ಗಳಿವೆ ಎಂಬುದನ್ನು ವೀಕ್ಷಿಸಿ ನೋಡಿದರೆ ನಮಗೆ ಅಂತರಜಾಲದಲ್ಲಿ ಎಷ್ಟು ವೈವಿಧ್ಯದ ತಾಣಗಳಿವೆಯೋ ಅಷ್ಟೂ ವೈವಿಧ್ಯ ಬ್ಲಾಗ್‌ಗಳಲ್ಲೂ ಇರುವುದು ಗೋಚರವಾಗುತ್ತದೆ. ಬ್ಲಾಗಿಗರಲ್ಲಿ ಬಹುಪಾಲು ಮಂದಿ ತಮ್ಮ ಹೊತ್ತು ಕಳೆಯಲು ಅಥವಾ ಏನಾದರೂ ಹೇಳಬೇಕು ಎನ್ನುವ ತುಡಿತ ತೀರಿಸಿಕೊಳ್ಳಲು ಬ್ಲಾಗಿಂಗ್ ಮಾಡುತ್ತಿದ್ದಾರೆ. ಹಾಗಿದ್ದರೂ ಇವರ ಬ್ಲಾಗ್‌ಗಳಲ್ಲಿ ಹಲವು ಉಪಯುಕ್ತ ಮಾಹಿತಿಗಳು ದೊರೆಯುವ ಸಾಧ್ಯತೆಗಳಿವೆ. ಬ್ಲಾಗ್ ಮಾಡುತ್ತಿರುವವರು ಕಥೆಗಾರ ಅಥವಾ ಸಾಹಿತಿಯಾಗಿದ್ದರಂತೂ ಓದುಗರಿಗೆ ಬೋನಸ್ ಎನ್ನಬಹುದು. ಪರಿಣತರಾದ ತಂತ್ರಜ್ಞರು ತಮ್ಮತಮ್ಮ ಕ್ಷೇತ್ರಗಳಲ್ಲಿ ಆಗುತ್ತಿರುವ ಹೊಸ ಸಂಶೋಧನೆಗಳ ಬಗ್ಗೆ ಪೂರ್ವಭಾವಿಯಾಗಿ ಬ್ಲಾಗ್ ಬರೆಯುವ ಮೂಲಕ ಈ ವಿಷಯಗಳಲ್ಲಿ ಆಸಕ್ತಿ ಇರುವವರಿಗೆ ಬೇಗನೆ ಮಾಹಿತಿ ಸಿಗುವಂತಾಗುತ್ತದೆ. ಉದಾಹರಣೆಗೆ ಮೈಕ್ರೋಸಾಫ್ಟ್ ಕಂಪೆನಿಯ ಹಲವು ಉದ್ಯೋಗಿಗಳು ಮುಂಬರುವ ತಂತ್ರಾಂಶಗಳ ಬಗ್ಗೆ ಬ್ಲಾಗಿಂಗ್ ಮಾಡುತ್ತಾರೆ. ಅಷ್ಟು ಮಾತ್ರವಲ್ಲ, ಈಗಿರುವ ತಂತ್ರಾಂಶಗಳ ಬಗ್ಗೆ ಸಲಹೆ ನೀಡುತ್ತಾರೆ. ಕೆಲವೊಮ್ಮೆ ಯಾವುದೇ ಗ್ರಾಹಕ ಕೈಪಿಡಿಯಲ್ಲೂ ಸಿಗದ ಮಾಹಿತಿ ಇಂತಹಬ್ಲಾಗ್‌ಗಳಲ್ಲಿ ದೊರೆಯುತ್ತವೆ. ಕೆಲವು ತಂತ್ರಜ್ಞರು ತಮ್ಮ ಕ್ಷೇತ್ರದಲ್ಲಿಯ ಕೆಲವು ಉಪಯುಕ್ತ ಸಲಹೆ ಕಿವಿಮಾತುಗಳನ್ನೂ ತಮ್ಮ ಬ್ಲಾಗ್‌ಗಳಲ್ಲಿ ನೀಡುತ್ತಿರುತ್ತಾರೆ. ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಕನ್ನಡ ಮತ್ತು ಗಣಕ ಸಂಬಂಧಿ ಸಲಹೆ ಸೂಚನೆಗಳನ್ನು ನಾನು ಆಗಾಗ ನನ್ನ ಬ್ಲಾಗ್‌ನಲ್ಲಿ ನೀಡುತ್ತಿರುತ್ತೇನೆ. ಆದುದರಿಂದ ಎಲ್ಲ ಬ್ಲಾಗ್‌ಗಳನ್ನು ಕೆಲಸವಿಲ್ಲದವರ ಗಳಹುವಿಕೆ ಎಂದು ತುಚ್ಛೀಕರಿಸುವಂತಿಲ್ಲ.
ಬ್ಲಾಗ್‌ಗಳು ಸಾಮಾಜಿಕ ಆಲೋಚನೆ ಮತ್ತು ಒತ್ತಡ ರೂಪಿಸುವ ಸಾಧನವಾಗಿಯೂ ರೂಪುಗೊಳ್ಳತೊಡಗಿದ್ದು ಸುಮಾರು ಎರಡು ಮೂರು ವರ್ಷಗಳ ಹಿಂದೆ. ಜನರು ಬ್ಲಾಗಿಂಗ್ ಮೂಲಕವೇ ಅಮೇರಿಕದ ಚುನಾವಣೆಯಲ್ಲಿ ಜನಾಭಿಪ್ರಾಯ ರೂಪಿಸಿ ಕಣದಲ್ಲಿದ್ದ ಉಮೇದುವಾರರೊಬ್ಬರು ಹಿಂದೆ ಸರಿಯುವಂತೆ ಮಾಡಿದಲ್ಲಿಂದ ಬ್ಲಾಗ್ ಒಂದು ಪ್ರಮುಖ ಅಸ್ತ್ರವಾಗತೊಡಗಿತು. ಇದು ಸಾಧ್ಯವಾಗಿದ್ದು ಬ್ಲಾಗಿಗರು ಹೆಚ್ಚು ಹೆಚ್ಚು ಸುದ್ದಿಗಳನ್ನು ಯಾವುದೇ ಸಂಪಾದಕರ ಕತ್ತರಿಗೆ ಸಿಗದಂತೆ ತಮ್ಮ ಬ್ಲಾಗ್‌ಗಳಲ್ಲಿ ದಾಖಲಿಸತೊಡಗಿದುದರಿಂದ. ಆಗ ಈ ಬ್ಲಾಗ್ ಎನ್ನುವುದು ಒಂದು ಪರ್ಯಾಯ ಪತ್ರಿಕಾ ಮಾಧ್ಯಮವೇ ಆಗಿ ಹೊರಹೊಮ್ಮುವ ಸಾಧ್ಯತೆ ಜನರಿಗೆ ವೇದ್ಯವಾಯಿತು.
ಬ್ಲಾಗಿಂಗ್ ಒಂದು ಪರ್ಯಾಯ ಪತ್ರಿಕೋದ್ಯಮವೇ? ಅಥವಾ ಬ್ಲಾಗಿಂಗ್‌ನ್ನುಪರ್ಯಾಯ ಪತ್ರಿಕೋದ್ಯಮವಾಗಿ ನಡೆಸಿಕೊಂಡು ಬರಬಹುದೇ? ಹೌದು ಎಂದು ಹೇಳಬಹುದು. ಇದು ಹೇಗೆ ಸಾಧ್ಯ? ಈ ಪ್ರಶ್ನೆಗೆ ಉತ್ತರ ನೀಡುವಮೊದಲು ಪತ್ರಿಕೋದ್ಯಮ ಎಂದರೇನು ಎಂದು ತಿಳಿಯೋಣ. ಪತ್ರಿಕೋದ್ಯಮ ಎನ್ನುವುದು ಜರ್ನಲಿಸಂ ಎನ್ನುವ ಇಂಗ್ಲಿಶ್ ಪದಕ್ಕೆ ಪಾರಿಭಾಷಿಕ ಪದವಾಗಿ ಬಳಕೆಯಲ್ಲಿದೆ. ಜರ್ನಲಿಸಂ ಪದವು ಜರ್ನಲ್ ಎಂಬ ಪದದಿಂದ ವ್ಯುತ್ಪತ್ತಿಯಾಗಿದೆ. ದಿನಚರಿ ಎಂಬುದು ಜರ್ನಲ್ ಪದದ ಅರ್ಥ. ದಿನಚರಿ ಇಟ್ಟುಕೊಳ್ಳುವುದು ಎಂಬುದೇ ಜರ್ನಲಿಸಂ ಪದದ ಮೂಲ ಅರ್ಥ. ಬ್ಲಾಗಿಂಗ್ ಕೂಡ ಒಂದು ರೀತಿಯಲ್ಲಿ ದಿನಚರಿಯೇ. ಹೀಗೆ ಸೈದ್ಧಾಂತಿಕವಾಗಿ ವಾದಿಸಿದರೂ ಬ್ಲಾಗಿಂಗ್ಅನ್ನು ಪತ್ರಿಕೋದ್ಯಮ ಎನ್ನಬಹುದು.
ಬ್ಲಾಗಿಂಗ್ ಪತ್ರಿಕೋದ್ಯಮ ಯಾಕೆ ಎಂದು ವಿಚಾರಿಸುವ ಮೊದಲು ಮುಖ್ಯವಾಹಿನಿಯ ಪತ್ರಿಕೆಗಳ ತೊಂದರೆಗಳನ್ನು ವಿಶ್ಲೇಷಿಸೋಣ. ಒಳಿತುಗಳ ಬಗ್ಗೆ ಹಲವು ಕಡೆ ಹಲವು ಬಾರಿ ಪುನರುಚ್ಚರಿಸಿರುವುದರಿಂದ ಅವುಗಳನ್ನು ಇಲ್ಲಿ ಇನ್ನೊಮ್ಮೆ ದಾಖಲಿಸುವ ಅಗತ್ಯವಿಲ್ಲ. ಪತ್ರಿಕೆಗಳು ಬದುಕುವುದೇ ಜಾಹೀರಾತುಗಳಿಂದ. ಜಾಹೀರಾತು ನೀಡುವವರ ವಿರುದ್ಧ ಯಾವುದೇ ಲೇಖನ ಬರೆಯಬೇಕಾದರೆ ಪತ್ರಿಕೆಗಳು ಹಿಂಜರಿಯುತ್ತವೆ.ಕ್ರುಪೆ:ವಿ ಕ
No comments:
Post a Comment